Tuesday, November 17, 2009

ಇದು ಬರೀ ಮಕ್ಕಳಾಟವಲ್ಲ!

ದಿನವಿಡೀ ಚಡಪಡಿಕೆ. ಕಣ್ಮುಚ್ಚಿದರೂ ಅವವೇ ಚಿತ್ರಗಳು. ಆಫೀಸಿನ ಬಿಝಿಯಲ್ಲೂ ಅದೇ ಧ್ಯಾನ. ದಿನಕ್ಕೆರಡು ಬಾರಿ ಹೋಗಿ ನೋಡದಿದ್ದರೆ ಸಮಾಧಾನವಿಲ್ಲ. ನಿಮ್ಮ ಕಂಪ್ಯೂಟರಿನ ಹತ್ತಿರವೇ ಸುಳಿದಾಡುತ್ತಿರುವ ಮ್ಯಾನೇಜರಿನ ಬಗ್ಗೆ ಕೋಪ. ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿ ಏನೋ ಕನಸು ಬಿದ್ದಂತಾಗಿ ಎಚ್ಚರಾಗಿ ದಿಗ್ಗನೆ ಎದ್ದು ಕೂರುತ್ತೀರಿ.

ಇದ್ಯಾವುದಪ್ಪಾ ಹೊಸ ಕಾಯಿಲೆ ಅಂತ ಗಾಭರಿಯಾದಿರಾ? ಹೌದು, ವಿಶ್ವಾದ್ಯಂತ ಕೋಟ್ಯಂತರ ಜನರ ನಿದ್ದೆ ಕೆಡಿಸಿರುವ ಈ ಕಾಯಿಲೆಯ ಹೆಸರು ಫಾರ್ಮ್‌ವಿಲ್ಲೆ ಎಂಬ ಆಟದ ಅಡಿಕ್ಷನ್ನು! ಅಂತರ್ಜಾಲದ ಜನಪ್ರಿಯ ಸ್ನೇಹಸಂವಹನ ತಾಣವಾದ ಫೇಸ್‌ಬುಕ್‌ನಲ್ಲಿರುವ ಈ ಆಟದ ಮೋಡಿಗೆ ಒಳಗಾದಿರಾದರೆ ಈ ಕಾಯಿಲೆ ನಿಮಗೂ ತಗುಲಿಕೊಂಡಿತು ಅಂತಲೇ ಅರ್ಥ!

ಏನಿದು ಫಾರ್ಮ್‌ವಿಲ್ಲೆ? ಫೇಸ್‌ಬುಕ್ಕಿನಲ್ಲಿ ನಿಮ್ಮದೊಂದು ಖಾತೆ ಇದೆಯಾದರೆ ಈ ಆಟ ಆಡಬಹುದು. ಈ ಆಟಕ್ಕೆ ಸೇರಿಕೊಂಡ ತಕ್ಷಣ ನಿಮಗೆ ಒಂದಷ್ಟು ಜಮೀನನ್ನು ಕೊಡಲಾಗುತ್ತದೆ. ಈ ಜಮೀನಿನಲ್ಲಿ ನೀವು ಕೃಷಿ ಕಾರ್ಯ ಕೈಗೊಳ್ಳಬಹುದು. ಮೊದಲಿಗೆ ನೆಲವನ್ನು ಉಳುಮೆ ಮಾಡಬೇಕು. ನಂತರ ಮಾರುಕಟ್ಟೆಗೆ ಹೋಗಿ, ಅಲ್ಲಿ ಲಭ್ಯವಿರುವ ವಿವಿಧ ಬಗೆಯ ಬೀಜಗಳಲ್ಲಿ ನಿಮಗೆ ಬೇಕಾದ್ದನ್ನು ಕೊಂಡು ತಂದು ಉಳುಮೆ ಮಾಡಿದ ಜಾಗದಲ್ಲಿ ಬಿತ್ತಬೇಕು. ಹೀಗೆ ಬಿತ್ತಲ್ಪಟ್ಟ ಬೀಜ, ಒಂದು ನಿರ್ಧಿಷ್ಟ ಕಾಲಾವಧಿಯಲ್ಲಿ ಗಿಡವಾಗಿ ಬೆಳೆದು ಕೊಯ್ಲಿಗೆ ಅಣಿಯಾಗುತ್ತದೆ. ಸುಗ್ಗಿಯಿಂದ ಬಂದ ಹಣದಿಂದ ಮತ್ತೆ ಉಳುಮೆ ಮಾಡಿ ಬೀಜಗಳನ್ನು ಬಿತ್ತಬಹುದು. ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ, ಬದನೆ, ಕುಂಬಳ, ಸೀತಾಫಲ, ಭತ್ತ, ಮುಂತಾದ ಬೀಜಗಳಿರುತ್ತವೆ. ಅವಕ್ಕೆ ನಿರ್ಧಿಷ್ಟ ಬೆಲೆಯೂ ನಿಗಧಿಯಾಗಿರುತ್ತದೆ. ಸ್ಟ್ರಾಬೆರಿಗೆ ಹತ್ತು ರೂಪಾಯಿಯಾದರೆ ಗೋಧಿಗೆ ಮೂವತ್ತೈದು ರೂಪಾಯಿ. ಸ್ಟ್ರಾಬೆರಿ ಕೇವಲ ನಾಲ್ಕು ತಾಸುಗಳಲ್ಲಿ ಬೆಳೆದು ಕೊಯ್ಲಿಗೆ ತಯಾರಾಗುತ್ತದೆ. ಗೋಧಿ ಬೆಳೆಯಲು ಮೂರು ದಿವಸ ಬೇಕು. ಬೆಳೆದ ಸ್ಟ್ರಾಬೆರಿಯ ಬೆಲೆ ಮೂವತ್ತೈದು ರೂಪಾಯಿಯಾದರೆ ಗೋಧಿಗೆ ನೂರಾ ಹದಿನೈದು ರೂಪಾಯಿ. ನಿರ್ಧಿಷ್ಟ ಸಮಯದೊಳಗೆ ಸುಗ್ಗಿ ಮಾಡದಿದ್ದರೆ ಬೆಳೆ ಒಣಗಿಹೋಗುತ್ತದೆ.

ನಿಮ್ಮ ಜಮೀನಿನಲ್ಲಿ ಬಾಳೆ, ಸೇಬು, ನಿಂಬೆ, ದಾಳಿಂಬೆ ಇತ್ಯಾದಿ ಮರಗಳನ್ನೂ ಬೆಳೆಸಬಹುದು. ಇವೂ ಮೂರ್ನಾಲ್ಕು ದಿನಗಳಿಗೊಮ್ಮೆ ಫಲ ಕೊಡುತ್ತವೆ. ಕತ್ತರಿಸಿ ಮಾರಾಟ ಮಾಡಿದ ಮೇಲೆ ಮತ್ತೆ ಮೂರ್ನಾಲ್ಕು ದಿನದಲ್ಲಿ ಹಣ್ಣು ಬಿಡುತ್ತದೆ. ಕೃಷಿಯಷ್ಟೇ ಅಲ್ಲದೆ, ಫಾರ್ಮ್‌ವಿಲ್ಲೆಯಲ್ಲಿ ಹೈನುಗಾರಿಕೆಯನ್ನೂ ಮಾಡಬಹುದು. ಹಸು, ಮೇಕೆ, ಕುದುರೆ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಸಾಕಬಹುದು. ಹಸುವಿನಿಂದ ಹಾಲು ಸಿಕ್ಕರೆ ಕೋಳಿಯಿಂದ ಮೊಟ್ಟೆ ಸಿಗುತ್ತದೆ.

ನೀವು ಕೃಷಿಯಲ್ಲಿ ನೈಪುಣ್ಯತೆ ಹೊಂದುತ್ತ ಹೋದಂತೆ ಹೆಚ್ಚು ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯಲಿಕ್ಕೆ ಮಾರುಕಟ್ಟೆಯಲ್ಲಿ ಬೀಜಗಳು ದೊರೆಯತೊಡಗುತ್ತವೆ. ಅವಶ್ಯಕತೆ ಜಾಸ್ತಿಯಾದಂತೆ ನೀವು ಟ್ರಾಕ್ಟರ್, ಸೀಡರ್, ಹಾರ್ವೆಸ್ಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಕೊಳ್ಳಬಹುದು. ಇವುಗಳಿಂದಾಗಿ ಉಳುಮೆ, ಬಿತ್ತನೆ, ಕೊಯ್ಲುಗಳು ತ್ವರಿತ ಗತಿಯಲ್ಲಿ ಆಗುತ್ತವೆ. ಹಣ ಸಂಪಾದಿಸುತ್ತ ಹೋದಂತೆ ನೀವು ಜಮೀನನ್ನು ವಿಸ್ತರಿಸಬಹುದು, ಫಾರ್ಮ್‌ಹೌಸ್ ಕಟ್ಟಿಕೊಳ್ಳಬಹುದು, ಬಾವಿ ತೆಗೆಸಬಹುದು, ಕಾಂಪೌಂಡ್ ವಾಲ್ ಕಟ್ಟಿಸಬಹುದು, ತೋರಣಬಾಗಿಲು-ಏರ್‌ಬಲೂನುಗಳಂತಹ ವಸ್ತುಗಳಿಂದ ಜಮೀನನ್ನು ಅಲಂಕರಿಸಬಹುದು, ಹಸುಗಳು ಜಾಸ್ತಿಯಾದರೆ ಡೇರಿ ಕಟ್ಟಿಸಬಹುದು. ಅಷ್ಟೇ ಅಲ್ಲ, ನಿಮ್ಮ ಪಕ್ಕದ ಜಮೀನಿಗೆ ಹೋಗಿ ಅವರಿಗೆ ಸಹಾಯ ಮಾಡಬಹುದು (ಉದಾ: ಕಳೆ ಕಿತ್ತುಕೊಡುವುದು, ಕಾಟ ಕೊಡುವ ಕಾಗೆ-ನರಿಗಳನ್ನು ಓಡಿಸುವುದು, ಕೀಟನಾಶಕ ಸಿಂಪಡಿಸುವುದು, ಯಾವುದಾದರೂ ಸಸಿ ಅಥವಾ ಪ್ರಾಣಿಯನ್ನು ಉಡುಗೊರೆಯಾಗಿ ಕೊಡುವುದು). ಇದರಿಂದಾಗಿ ನಿಮಗೆ ಅನುಭವ ಜಾಸ್ತಿಯಾಗುತ್ತದಲ್ಲದೇ ಸ್ವಲ್ಪ ಹಣವೂ ಸಿಗುತ್ತದೆ. ಕೃಷಿಯಲ್ಲಿ ಸಾಧನೆ ಮಾಡುತ್ತ ಹೋದಂತೆ ನಿಮಗೆ ಹಲವು ಅವಾರ್ಡುಗಳು, ಬಿರುದುಗಳು ದೊರೆಯುತ್ತ ಹೋಗುತ್ತವೆ.

ಕೆಲವೇ ವರ್ಷಗಳ ಹಿಂದಿನ ನೆನಪು: ನಾನು ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಹೊಸರುಚಿಯ ಪುಟವನ್ನು ಹಿಡಿದು ಅಡುಗೆಮನೆಯಲ್ಲಿ ಅಮ್ಮನಿಗೆ ಅದನ್ನು ಮಾಡಿಕೊಡುವಂತೆ ಹಟ ಮಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ಅಜ್ಜಿ, "ಅಪ್ಪೀ, ನೀ ಸುಮ್ನಿರು. ಪುಸ್ತಕದ ಬದನೇಕಾಯಿ ತಿನ್ನಕ್ಕೆ ಬರದಿಲ್ಲೆ" ಅಂತ ಹೇಳಿದ್ದಳು. ಅಂದರೆ, ಅಜ್ಜಿಯ ಪ್ರಕಾರ, ಭೌತಿಕವಲ್ಲದ, ಅನುಭವಜನ್ಯವಲ್ಲದ, ಕೈಯಾರೆ ಮಾಡದ ಯಾವ ಕೆಲಸ / ತಯಾರಾದ ವಸ್ತುವೂ ಉಪಯೋಗಕ್ಕೆ ಬಾರದ್ದು ಅಂತ. ಹಾಗಾದರೆ, ಇಲ್ಲಿ ನಾವೆಲ್ಲ ಹುಚ್ಚಿಗೆ ಬಿದ್ದವರಂತೆ ಮಾಡುತ್ತಿರುವುದು ಏನು? ಬಾಳೆಗಿಡದಲ್ಲಿ ಗೊನೆ ತೂಗಿದಾಗ ಬೀಗಿದ್ದು, ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ದರೆ ಬೆಳೆ ಎಲ್ಲಿ ಹಾಳಾಗುತ್ತದೋ ಅಂತ ಟೆನ್ಷನ್ ಮಾಡಿಕೊಂಡದ್ದು, ಟ್ರಾಕ್ಟರ್ ಬಳಸಲಿಕ್ಕೆ ಇಂಧನ ಖಾಲಿಯಾಯ್ತಲ್ಲ ಅಂತ ಖಿನ್ನಗೊಂಡದ್ದು, ಕಲ್ಲಂಗಡಿ ಮಾರಿದಾಗ ಬಂದ ದುಪ್ಪಟ್ಟು ಹಣ ಕಂಡು ಖುಶಿಯಾದದ್ದು, ದಾರಿ ತಪ್ಪಿ ಬಂದಿದ್ದ ಆಮೆಗೆ ಮನೆ ಕಲ್ಪಿಸಿ ತೃಪ್ತಿ ಪಟ್ಟುಕೊಂಡದ್ದು, ಯಾವುದೋ ಕಾಡುಪ್ರಾಣಿ ಹೊಲಕ್ಕೆ ನುಗ್ಗಿದಂತೆ ಕನಸು ಕಂಡು ನಿದ್ದೆಯಿಂದ ಎಚ್ಚೆತ್ತದ್ದು.... ಇವಕ್ಕೆಲ್ಲ ಏನರ್ಥ? ಕೇವಲ ಕಂಪ್ಯೂಟರ್ ಪರದೆಯ ಮೇಲಣ ಹುಸಿ ಚಿತ್ರಗಳನ್ನು ನಿಜವೆಂದೇ ಭಾವಿಸಿ ಶ್ರದ್ಧೆಯಿಂದ, ಖಂಡಿತ ಮನಃಪೂರ್ವಕವಾಗಿ ಈ ಆಟದಂತಹ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರುವುದು ಇದ್ಯಾವ ಸೀಮೆಯ ಮರುಳು? ಊರಿನಲ್ಲಿರುವ ತೋಟ-ಗದ್ದೆಗಳಲ್ಲಿ ವ್ಯವಸಾಯ ಮಾಡುವುದು ಬಿಟ್ಟು, ನಗರಗಳಲ್ಲಿ ನೆಲೆಸಿರುವ ನಾವು ಕಂಪ್ಯೂಟರ್ ಮುಂದೆ ಕೂತು ಥೇಟ್ ರೈತನ ರೀತಿ ಆಲೋಚಿಸುತ್ತಿರುವುದು-ವರ್ತಿಸುತ್ತಿರುವುದು ವ್ಯಂಗ್ಯದ ಪರಾಕಾಷ್ಠೆಯೇ, ವಿಪರ್ಯಾಸದ ಪರಮಾವಧಿಯೇ ಅಥವಾ ಮೂರ್ಖತನದ ತುರೀಯ ಸ್ಥಿತಿಯೇ?

ಗೊತ್ತಿಲ್ಲ! ಆದರೆ, ಅಂತರ್ಜಾಲ ವಿಶ್ವಕೋಶ ವಿಕಿಪೀಡಿಯಾ ಪ್ರಕಾರ, ವಿಶ್ವದಾದ್ಯಂತ ಇದುವರೆಗೆ ಸುಮಾರು ಆರೂವರೆ ಕೋಟಿ ಜನ ಈ ಹುಚ್ಚಿಗೆ ಬಲಿಯಾಗಿದ್ದಾರೆ. ಸಧ್ಯದ ಫೇಸ್‌ಬುಕ್ಕಿನ ಅತ್ಯಂತ ಜನಪ್ರಿಯ ಆಟವೂ ಇದಾಗಿದೆ. ಇದಕ್ಕೆ ಬಲಿಯಾಗಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕ ಬದಿಗಿಟ್ಟು ಬಂದು ಹಸುವಿನ ಹಾಲು ಕರೆಯುತ್ತಿದ್ದರೆ ಮುದುಕರು ಬೆನ್ನು ಬಗ್ಗಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಅಷ್ಟೂ ಗಿಡಗಳಲ್ಲೂ ಹಣ್ಣು ಬಿಟ್ಟಿದ್ದು ನೋಡಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಕೆಲ ಗಂಡಸರು ಲಕ್ಷಗಟ್ಟಲೆ ಹಣ ಮಾಡಿ ಖುಶಿ ಪಡುತ್ತಿದ್ದರೆ, ಗೃಹಿಣಿಯರಿಗೆ ಹಣಕ್ಕಿಂತ ತಮ್ಮ ಜಮೀನನ್ನು ಅಲಂಕರಿಸುವುದರಲ್ಲೇ ಆನಂದ. ಜಮೀನಿನ ತುಂಬ ದ್ರಾಕ್ಷಿ ಬೆಳೆದಿದ್ದೇವೆ; ತಿನ್ನಲಿಕ್ಕೆ ಬರುತ್ತಿಲ್ಲ, ಕೆಚ್ಚಲ ತುಂಬ ಹಾಲು ತುಂಬಿ ನಿಂತಿದೆ ಹಸು; ಕುಡಿಯಲಿಕ್ಕೆ ಸಿಗುತ್ತಿಲ್ಲ, ಮನೆಯೆದುರಿನ ಅಂಗಳದ ತುಂಬ ಗುಲಾಬಿಯಿದೆ; ಮುಡಿಯಲಿಕ್ಕೆ ಆಗುತ್ತಿಲ್ಲ, ಜೇಬಿನ ತುಂಬ ಹಣವಿದೆ; ಕಂಪ್ಯೂಟರಿನ ಮುಂದಿಂದ ಎದ್ದು ಬಂದರೆ ಬಳಸಲಿಕ್ಕೆ ಬರುವುದಿಲ್ಲ!

ಕನ್ನಡಿಯೊಳಗಿನ ಗಂಟು ಎಂದರೆ ಇದೇನಾ?!

[ವಿಜಯ ಕರ್ನಾಟಕದ ಸಾಪ್ತಾಹಿಕ ಲವಲvkಗಾಗಿ ಬರೆದದ್ದು]

Thursday, October 29, 2009

ಉಪ್ಪು-ಖಾರ

ಹಸಿರು ಸಮುದ್ರದಂತೆ ಅಂಗಳದ ತುಂಬೆಲ್ಲ
ಹಬ್ಬಿಕೊಂಡಿರುವ ಬಳ್ಳಿಯ ದೊಡ್ಡ ಎಲೆಗಳ
ಮರೆಯಲ್ಲೆಲ್ಲೋ ಅಡಗಿದೆ ಒಂದು
ಮಿಡಿ ಸೌತೆಕಾಯಿ ನಮಗಾಗಿಯೇ.
ಕಿತ್ತು ತರಬೇಕು, ಗೆಳೆಯಾ
ಜತೆಗೆ ಸೂಜಿಮೆಣಸು ಬೇಕು
ಮತ್ತಿಷ್ಟೇ ಉಪ್ಪು, ಇದ್ದರೆ
ವಾಟೆಪುಡಿ; ಇಲ್ಲವೇ ನಿಂಬೆಹುಳಿ

ಕೂರಬೇಕು ಸುತ್ತ, ಮಧ್ಯದಲ್ಲಿ ತಟ್ಟೆ
ಮೆಣಸಿನಕಾಯಿ ನುರಿದ ಉರಿಯ
ಭುಗುಭುಗು ಬೆರಳನ್ನು ಚಾಚಿ ಎತ್ತಿಕೊಳ್ಳಬೇಕು
ಹೋಳುಗಳನ್ನು ಒಂದೊಂದೇ
ಕರುಂಕುರುಂ ಸದ್ದಿನ ಬ್ರಹ್ಮಾನಂದದಲ್ಲಿ
ತೇಲಿ ಮುಳುಗಬೇಕು, ಗೆಳೆಯಾ
ಜೋರು ನಗೆಯನಾಡಬೇಕು

ಒಂಟಿಜೀವಿಗಳೆಲ್ಲ ಸೌತೆಕಾಯಿಯನ್ನು ಬರಿದೇ ತಿನ್ನುವರು
ದುಃಖಿಗಳು ಸಾರಿಗೆ ಕತ್ತರಿಸಿ ಹಾಕಿ ಬೇಯಿಸಿ ಬಿಡುವರು
ಉಪ್ಪು-ಖಾರ ಸವಿಯಲಿಕ್ಕೆ ಗೆಳೆಯರಿರಬೇಕು
ಖಾರಕ್ಕೆ ಬಾಯಿ ಸೆಳೆವಾಗ ನಲಿವು ಇರಬೇಕು
ನಕ್ಕು ನಕ್ಕು ನೆತ್ತಿಗೆ ಸಿಕ್ಕಾಗ ಖಾರ,
ಬೇಕು ಬೆನ್ನಿಗೆ ಗುದ್ದಲಿಕ್ಕೆ ನಿನ್ನದೊಂದು ಕೈ
ಕಣ್ಣಂಚಿಂದ ಹನಿಯುದುರಿದ್ದು
ಖಾರಕ್ಕೋ ಆನಂದಕ್ಕೋ ತಿಳಿಯದೆ ಹೋಗಬೇಕು

ಎಲ್ಲಿದ್ದೆ, ಏನಾಗಿದ್ದೆ, ಹೇಗೆ ಬಂದೆ, ಮುಂದೆ ಏನು-
ಅಂತೆಲ್ಲ ಕೇಳುವುದೇ ಇಲ್ಲ ನಾನು...
ಇರು ಇಲ್ಲೇ, ಉಳಿದಿದೆ ಮಸಾಲೆ ಇನ್ನೂ
ಬಳ್ಳಿಯಲ್ಲಿ ಇನ್ನೂ ಒಂದು ಸೌತೆಮಿಡಿ ಇದೆಯಂತೆ..
ಅದರ ತಿರುಳಿನಲ್ಲಿ ಅಸಂಖ್ಯ ಮುತ್ತಿನ ಹರಳುಗಳು
ಒತ್ತೊತ್ತಾಗಿ ಕೂತಿವೆಯಂತೆ ನೋಡಲು-
ನನ್ನ - ನಿನ್ನ.

ಇರು ಇಲ್ಲೇ, ಕೊಯ್ದು ತರುತ್ತೇನೆ ಕ್ಷಣದಲ್ಲಿ.

[ಊರಿಂದ ಕಾಣೆಯಾಗಿದ್ದ ಗೆಳೆಯ ಗುಂಡ, ಮೂರು ವರ್ಷಗಳ ನಂತರ ಮರಳಿ ಬಂದಿದ್ದಾನಂತೆ ಎಂಬ ಸುದ್ದಿ ಕೇಳಿ..]

Friday, October 16, 2009

ಗೊಂದಲದ ಮಬ್ಬು ತೊಡೆಯಲಿ ದೀಪಾವಳಿ

ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.

ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್‌ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.

ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್‌ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್‌ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್‌ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್‌ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.

ಈಗ ಕೆಲ ದಿನಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್‌ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.

ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್‌ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.

ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.

ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.

Tuesday, September 22, 2009

ಡಬ್ಬಿ ಪ್ರೀತಿಯ ಅಮ್ಮ

ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.

ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್‌ನೆಸ್‌ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ - ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.

ಈ ಸಮಸ್ಯೆ ದೂರವಾದದ್ದು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಿಗಳು ಬಂದಮೇಲೆ. “ಎಲ್ಲಾರ್ ಮನೇಲೂ ಈಗ ಪ್ಲಾಸ್ಟಿಕ್ ಡಬ್ಬಿ. ಬೇಳೆ-ಕಾಳು ತುಂಬಿಸಿ ನಾಗಂದಿಗೆ ಮೇಲೆ ಇಟ್ರೆ ನೀಟಾಗಿ ಎಲ್ಲಾ ಕಾಣ್ತು. ಈ ಸಲ ಸಾಗರಕ್ಕೆ ಹೋದಾಗ ನಮ್ಮನಿಗೂ ಐದಾರು ಡಬ್ಬಿ ತಗಂಬನ್ನಿ” ಎಂಬ ಅಮ್ಮನ ಚಿತಾವಣೆಯನ್ನು ಪಾಲಿಸಿದ ಅಪ್ಪ, ಆ ಸಲ ಸಾಗರದಿಂದ ಬರುವಾಗ ವಿನಾಯಕ ರಾಯರ ಅಂಗಡಿಯಿಂದ ಆರು ಚಾಕ್ಲೇಟ್ ಡಬ್ಬಿ ತಂದ. ಈ ಚಾಕ್ಲೇಟ್ ಡಬ್ಬಿಗಳ ಮೇಲಿದ್ದ ಆಲ್ಫೆನ್ಲೀಬೇ, ಇಕ್ಲೇರ್ಸ್, ಹಾಜ್‌ಮುಲಾ ಇತ್ಯಾದಿ ಸ್ಟಿಕ್ಕರುಗಳನ್ನು ಕಿತ್ತು ತೆಗೆಯುವ ಕೆಲಸ ನನಗೆ ಬಂತು. ಮತ್ತೆ ಇವುಗಳಲ್ಲಿ ಇನ್ನೂ ಆಯಾ ಚಾಕ್ಲೇಟಿನ ಫ್ಲೇವರಿನ ಪರಿಮಳ ಇರುತ್ತಿತ್ತು. ಮುಚ್ಚಳ ತೆರೆದರೆ ಸಾಕು, ಆ ಚಾಕ್ಲೇಟಿನ ರುಚಿಯೇ ನೆನಪಾಗಿ ಬಾಯಲ್ಲಿ ನೀರು ಬರುತ್ತಿತ್ತು. ಅದಕ್ಕೇ, ತುಂಬಾ ಬೇಜಾರಾಗಿ ನಾನು, “ಖಾಲಿ ಡಬ್ಬಿ ತರೋದಕ್ಕಿಂತ ತುಂಬಿದ್ದೇ ತರ್ಲಾಗಿತ್ತು” ಅಂತ ಅಪ್ಪನಿಗೆ ಹೇಳಿದೆ. ಅಪ್ಪನಿಗೆ ಇದ್ಯಾಕೋ ದುಬಾರಿ ವ್ಯವಹಾರ ಆಯ್ತಲ್ಲಾ ಅನಿಸಿರಬೇಕು, “ವಿನಾಯಕ ರಾಯರ ಅಂಗಡೀಲಿ ಇದ್ದಿದ್ದು ಅಷ್ಟೂ ಖಾಲಿ ಚಾಕ್ಲೇಟ್ ಡಬ್ಬಿ! ಇದೇ, ಇದೊಂದರಲ್ಲಿ ಎರಡು ಉಳಿದಿತ್ತು, ಜೇಬಲ್ ಇಟ್ಕಂಡ್ ಬೈಂದಿ” ಎನ್ನುತ್ತಾ, ಎರಡು ಚಾಕ್ಲೇಟ್ ತೆಗೆದು ಕೊಟ್ಟ. ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಗೊತ್ತಾದರೂ ನಾನು ಅದನ್ನು ಇಸಕೊಂಡು, ಖುಶಿಯಿಂದ ಸ್ಟಿಕರ್ ಕೀಳುವುದನ್ನು ಮುಂದುವರೆಸಿದೆ. ಈಗ ಬೇಡವಾದ ಹಳೆಯ ತಗಡಿನ ರೌಂಡು ಡಬ್ಬಿಗಳಿಗೆ ತೂತು ಮಾಡಿ, ಮಧ್ಯೆ ದಾರ ಪೋಣಿಸಿ ಬುಲ್ಡೇಜರ್ ಮಾಡಿ ಮನೆ ತುಂಬಾ ಶಬ್ದ ಮಾಡುತ್ತಾ ಓಡಾಡಿಸಿದೆ.

ಆ ಚಾಕ್ಲೇಟ್ ಡಬ್ಬಿಗಳು ನಮ್ಮ ಮನೆಯಲ್ಲಿ ಸುಮಾರು ವರ್ಷ ಕಾಲ ಚಲಾವಣೆಯಲ್ಲಿದ್ದವು. ಉದ್ದು, ಹೆಸರು, ತೊಗರಿ, ಕಡಲೆ, ಕೊತ್ತಂಬರಿಯಾದಿಯಾಗಿ ಅನೇಕ ಬಣ್ಣಬಣ್ಣದ ದವಸ ಧಾನ್ಯಗಳನ್ನು ಇವು ತಮ್ಮೊಡಲಲ್ಲಿಟ್ಟುಕೊಂಡು ಸಂರಕ್ಷಿಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ, ಮಳೆಗಾಲಕ್ಕೆ ಮುನ್ನ, ಕಾಳು-ಬೇಳೆಗಳನ್ನು ತರಿಸಿ, ಹಸನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದೆವು. ಹಾಗೆ ತುಂಬಿಡುವ ಮುನ್ನ ಡಬ್ಬಿಯನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ, ಒರೆಸಿ ಇಡಬೇಕಿತ್ತು. ಪ್ರತಿ ವರ್ಷವೂ ಮೆಂತೆಕಾಳನ್ನೇ ತುಂಬಿಸಿಕೊಂಡಿರಬೇಕೆಂದು ಸಣ್ಣ ಡಬ್ಬಿಯ ಮುಖ ಕಹಿಯಾಗುವುದನ್ನೂ, ಪ್ರತಿ ವರ್ಷವೂ ಒಣಮೆಣಸಿನ ಕಾಯಿ ತುಂಬಿಸಿಕೊಂಡಿರಬೇಕೆಂದು ದೊಡ್ಡ ಡಬ್ಬಿ ಮಾಡಿದ ಸಿಟ್ಟಿಗೆ ಅದರ ಮುಖ ಕೆಂಪಾಗುವುದನ್ನೂ ನಾನು ಗಮನಿಸುತ್ತಿದ್ದೆ. ಇವೆಲ್ಲವುಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಗತ್ತಿನಿಂದ ಮೆರೆಯುತ್ತಿದ್ದುದು ಉಪ್ಪಿನಕಾಯಿಯ ಪಿಂಗಾಣಿ ಜಾಡಿ ಮತ್ತೆ ತನ್ನೊಳಗೆ ಅಮ್ಮನ ಚಿಲ್ಲರೆ ಕಾಸನ್ನು ಅಡಗಿಸಿಟ್ಟುಕೊಂಡಿರುತ್ತಿದ್ದ ಸಾಸಿವೆಕಾಳಿನ ಡಬ್ಬಿ -ಎರಡೇ.

ನಮ್ಮ ಮನೆಯಲ್ಲಿ ಒಂದಷ್ಟು ಗಾಜಿನ ಡಬ್ಬಿಗಳೂ ಇದ್ದವು. ಕಡಗಾಯಿ, ಕುಚ್ಚುಮಾವಿನಕಾಯಿ, ಸಕ್ಕರೆ, ಇತ್ಯಾದಿ ವಸ್ತುಗಳನ್ನು ಅವುಗಳಲ್ಲಿ ತುಂಬಿಸಿ ಅಡುಗೆಮನೆ ಪಕ್ಕದ ಚಿಕ್ಕ ಕಾಲುದಾರಿಯಲ್ಲಿದ್ದ ಕಪಾಟಿನಲ್ಲಿ ಅಮ್ಮ ಅವನ್ನು ಇಟ್ಟಿರುತ್ತಿದ್ದಳು. ಒಮ್ಮೆ ನನ್ನ ಅತ್ತಿಗೆ ಅದರ ಮೇಲ್ಗಡೆ ಅರೆಯಲ್ಲಿ ತಾನೇ ಅಡಗಿಸಿಟ್ಟುಕೊಂಡಿದ್ದ ಚಾಕ್ಲೇಟುಗಳನ್ನು ತೆಗೆದುಕೊಳ್ಳಲೆಂದು ಕಪಾಟಿನ ಕೆಳಾಗಡೆ ಅರೆಯ ಮೇಲೆ ಕಾಲಿಡುತ್ತಿದ್ದಂತೆಯೇ ಇಡೀ ಕಪಾಟೇ ಅವಳ ಮೇಲೆ ಮಗುಚಿ ಬಿದ್ದು, ಗಾಜಿನ ಡಬ್ಬಿಗಳೆಲ್ಲ ಒಡೆದುಹೋದವು. ಸದ್ದು ಕೇಳಿ ಓಡಿ ಬಂದ ನಾನು, ಆವರಣದ ತುಂಬಾ ಚೆಲ್ಲಿದ್ದ ಬಣ್ಣಬಣ್ಣದ ದ್ರವದ ಮಧ್ಯೆ ಅತ್ತಿಗೆ ಬಿದ್ದುಕೊಂಡಿರುವ ದೃಶ್ಯ ಕಂಡು, ಹೆದರಿ ಕಿಟಾರನೆ ಕಿರುಚಿಕೊಂಡಿದ್ದೆ. ಪುಣ್ಯಕ್ಕೆ ಸ್ವಲ್ಪ ಕೈಗೆ ಗಾಯವಾಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ ಅವಳಿಗೆ. ಸ್ಥಳಕ್ಕೆ ಧಾವಿಸಿದ ಅಮ್ಮ ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡಿದ್ದ ಕುಚ್ಚುಮಾವಿನಕಾಯಿ ನೆಲದ ಪಾಲಾದುದಕ್ಕೆ ತೀವ್ರವಾಗಿ ಬೇಸರ ಪಟ್ಟುಕೊಂಡಳು. ವಾರದವರೆಗೂ ಆ ವಾತಾವರಣದಲ್ಲಿ ಕುಚ್ಚುಮಾವಿನಕಾಯಿಯ ಪರಿಮಳ ಸುಳಿದಾಡುತ್ತಿತ್ತು.

ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು. ಅದಾಗಲೇ ಬೆಂಗಳೂರಿಗೆ ಸೇರಿಕೊಂಡಿದ್ದ ನನ್ನ ಬಳಿ ಫೋನಿನಲ್ಲಿ “ಅಪ್ಪೀ, ಈ ಸಲ ಬರಕ್ಕರೆ ಒಂದು ಕೆಜಿ ಸೈಜಿಂದು ಒಂದಷ್ಟ್ ಬಾಕ್ಸ್ ತಗಂಬಾ” ಅಂತ ಸಣ್ಣಗೆ ಹೇಳಿದಳು. ನಾನು ಅಮ್ಮನಿಗೆ ಖುಶಿಯಾಗಲಿ ಅಂತ, ಮೂರು ಸೈಜಿನ ಆರರಂತೆ ಒಟ್ಟು ಹದಿನೆಂಟು ಟಪ್ಪರ್‌ವೇರ್ ಡಬ್ಬಿ ಒಯ್ದು ಕೊಟ್ಟೆ. ಅಷ್ಟೇ ಅಲ್ಲ, ಅವಳನ್ನು ಸಾಗರಕ್ಕೆ ಕರೆದುಕೊಂಡು ಹೋಗಿ ಐದಾರು ದೊಡ್ಡ ದೊಡ್ಡ ಸ್ಟೀಲ್ ಡಬ್ಬಿಗಳನ್ನೂ ಕೊಡಿಸಿದೆ. ಅಷ್ಟನ್ನೆಲ್ಲಾ ಒಟ್ಟಿಗೆ ಮನೆಗೆ ತಂದುಕೊಂಡ ಅಮ್ಮ ಮುಗ್ದವಾಗಿ ಕೇಳಿದ್ದು ಒಂದೇ ಪ್ರಶ್ನೆ: “ಈಗ ಈ ಚಾಕ್ಲೇಟ್ ಡಬ್ಬೀನೆಲ್ಲ ಎಂಥ ಮಾಡದು?!”

ಅಷ್ಟೆಲ್ಲಾ ಡಬ್ಬಿ ಮನೆಯಲ್ಲಿದ್ದರೂ ಪ್ರತಿ ಸಲ ಮನೆಗೆ ಹೊರಟಾಗಲೂ ‘ಡಬ್ಬಿ ತಗಂಬಾ’ ಎಂದು ನೆನಪಿಸುವ ಅಮ್ಮನ ಬಗ್ಗೆ ನನಗೆ ಪ್ರೀತಿಲೇಪಿತ ಕೋಪ ಬಂದು ಕೊನೆಗದು ಮುದ್ದಾಗಿ ಪರಿವರ್ತಿತವಾಗಿ “ಅಯ್ಯೋ ಅಡ್ಡಿಲ್ಲೆ ಮಾರಾಯ್ತೀ” ಎಂದು ನಗುತ್ತಾ ಫೋನಿಡುವಂತೆ ಮಾಡುತ್ತದೆ. ಬೆಂಗಳೂರಿನ ಪುಟ್ಟ ಮನೆಯ ಪುಟ್ಟ ಕಿಚನ್ನಿನ ಪುಟ್ಟ ನಾಗಂದಿಗೆಯ ಮೇಲೆ ಬಿದ್ದುಕೊಂಡಿರುವ ಖಾಲಿ ಡಬ್ಬಿಗಳನ್ನು ಚೀಲದೊಳಗೆ ತುಂಬಿ ಊರಿನ ಬಸ್ಸಿನ ರಶ್ಶಿನೊಳಗೆ ತೂರಿಸುವಾಗ ರೂಮ್‌ಮೇಟ್ ರೇಗಿಸುತ್ತಾನೆ: ‘ಥೂ, ಡಬ್ಬಾ ನನ್ ಮಗನೇ!’. ನಾನು ತಕ್ಷಣ ಸರಿ ಮಾಡುತ್ತೇನೆ: ‘ಡಬ್ಬಾ ನನ್ ಮಗ ಅಲ್ಲ; ಡಬ್ಬಿಪ್ರೀತಿಯ ಅಮ್ಮನ ಮಗ’ ಅಂತ.

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.]

Wednesday, September 09, 2009

ಹಾರು

ಪಾರಿವಾಳಕ್ಕಿಂತ ಬಿಳಿಯ ಬಣ್ಣದ ಹಕ್ಕಿಗಳು
ಬಂದು ಒಳ ಸೇರಿಕೊಂಡುಬಿಟ್ಟಿವೆ...
ಹೊತ್ತೊತ್ತಿಗೆ ಕಾಳೊಂದು ಸಿಕ್ಕುತ್ತಿರುವಾಗ
ಹೊರ ಹಾರುವುದಾದರೂ ಏಕೆ ಎಂಬಂತ
ನಿಶ್ಚಿಂತೆಯಲ್ಲಿ ಸ್ಥಿರವಾಗಿಬಿಟ್ಟಿವೆ ಇಲ್ಲೇ.

ಕೆಲ ಹಕ್ಕಿಗಳಿಗೆ ಇದು ಗೂಡು;
ಕೆಲವಕ್ಕೆ ಪಂಜರ.

ಇಲ್ಲಿ ಹೊಸ ಕನಸುಗಳು ಗರ್ಭ ಕಟ್ಟುವುದಿಲ್ಲ;
ಗುಂಪಲ್ಲಿ ಅನುರಣಿಸುವ ಕಚ್ಚಾಟದ ಕಿಚಿಪಿಚಿಗಳು
ತೀರ್ಮಾನವಾಗುವುದಿಲ್ಲ;
ಅನಾವೃತಗೊಳ್ಳುವ ಹೃದಯದ ಚಿಲಿಪಿಲಿಗಳಿಗೆ
ಕಿವಿಯೇ ಇಲ್ಲ.

ಇಂತಹ ನೆಲೆಯಲ್ಲಿ ಅದ್ಯಾಕೆ ಅದೊಂದು ಹಕ್ಕಿ
ಹಾಗೆ ಕುಳಿತಿದೆ ಮೌನದಲ್ಲಿ?
ಗೂಡಿನೊಳಗೂ ಗೂಡು ರಚಿಸಿಕೊಂಡು ನಿ-
ಗೂಢವಾಗಿದೆ?
ಬಂದ ಹೊಸ-ಅಸಭ್ಯ ಹಕ್ಕಿಗೂ ಅಚ್ಚರಿ:
ಏಕೆ ತನ್ನ 'ತಾದಿಂ ತರಿಕಿಟ ತಾ'ಗಳನ್ನು ಮೆಚ್ಚುಗೆಯ
ಕಣ್ಣಿಂದ ಈಕ್ಷಿಸುತ್ತಿದೆ?
ಸಾವಕಾಶ ಎತ್ತುತ್ತಿದೆ ಕೈ- ಒಪ್ಪಿಗೆಯ ಮತಕ್ಕೆ-
ಬರುವಂತೆ ಆಮೆ ಚಿಪ್ಪಿಂದ ಹೊರಗೆ?
ನಿಬದ್ಧಗಳ ಹರಿದು ಹಾರುವ ತನ್ನಾಲೋಚನೆಗೆ
ಹೇಗೆ ಅರಳಿಸುತ್ತಿದೆ ಮಂದಸ್ಮಿತ ಕಣ್ಣಲ್ಲೇ..

ಸುತ್ತ ನಿಶ್ಯಬ್ದವಿದ್ದಾಗ ಪಿಸುಮಾತೇ ಗದ್ದಲವಾಗುತ್ತದೆ.
"ಹಾರಿ ಹೋಗುವುದು ಎಂದರೆ
ನೀನಂದುಕೊಂಡಿರುವುದಕ್ಕಿಂತ ಸುಲಭ ಚೀಫ್..
ರೆಕ್ಕೆಗಳನ್ನು ಬಿಚ್ಚಿ ವಿಹಂಗಮ
ತೂರಿ ಸರಳುಗಳ ನಡುವಿನ ಪುಟ್ಟ ಅವಕಾಶದಲ್ಲಿ
ಸೇರಿಬಿಡಬಹುದು ಗಗನ..
ಬಚ್ಚಿಟ್ಟುಕೊಳ್ಳಬಹುದು ಬೇಕಿದ್ದರೆ,
ಚಿಕ್ಕೆಗಳ ಹಿಂದೆ.. ಬಾ,
ಹೊರಡು"

-ಎಂದೆಲ್ಲ ಹೇಳಿದ್ದ ನೀನು
ಈಗ ಹೀಗ್ಯಾಕೆ ಅಲ್ಲಾಡದೇ ಮಲಗಿರುವೆ?
ಹೊರಗೆ ಬೆಚ್ಚಗೆ ಮಲಗಿದೆ ಲೋಕ..
ಅರೆ ಎಚ್ಚರದಲ್ಲಿ ತಾಯಿ ಕೊಟ್ಟ ಮೊಲೆಯಿಂದ
ಮಗು ಹೀರುತ್ತಿರುವ ಹಾಲಿನಲ್ಲಿ
ನಾಳೆ ಬೆಳಿಗ್ಗೆ ಅರಳಲಿರುವ ಮೊಗ್ಗುಗಳೊಡಲ
ಮಕರಂದವೆಲ್ಲ ಕರಗಿದೆ..
ಚಂದಿರನ ಬೆಳಕನ್ನು ಹೊತ್ತ ದೊಡ್ಡ ಮೋಡಗಳು
ಎತ್ತಲೋ ಹೋಗುತ್ತಿವೆ..
ಗಂಟೆಯ ಮುಳ್ಳಿನ ನಿಧಾನಗತಿಯನ್ನು
ಸೆಕೆಂಡಿನ ಮುಳ್ಳು ಹಾಸ್ಯ ಮಾಡುತ್ತಿದೆ..

ಇಂಥಲ್ಲಿ,
ನೀನ್ಯಾಕೆ ಮಲಗಿದ್ದೀಯ ಹೀಗೆ ರೆಕ್ಕೆಗಳ ಮಡಚಿ?
ದುಂಬಿಗೆ ಮೋಸದ ಅರಿವಾಗುವ ಮುನ್ನ,
ಮೋಡ ಕರಗಿ ಸುರಿಯುವ ಮುನ್ನ,
ಚಿಕ್ಕ ಮುಳ್ಳು ಸೂರ್ಯನಿಗೆ ಪುಕಾರು ಹೇಳುವ ಮುನ್ನ,

ಸೇರಿ ಬಿಡೋಣ ಗೌಪ್ಯದ ಗರ್ಭ.
ಬಾ ಮ್ಯಾಕ್, ಹೊರಡು.

[One Flew over the Cuckoo's Nest ಸಿನೆಮಾ ನೋಡಿ..]